DENN GANS SANGAD ರಂಗ ಪ್ರಯೋಗಶಾಲೆ

08199-243772

ಸಾಣೇಹಳ್ಳಿಯ ಪರಿಚಯ

Education Background

ಈ ರಂಗಪ್ರಯೋಗ ಶಾಲೆ 2008ರಲ್ಲಿ ಪ್ರಾರಂಭವಾಗಿದೆ. ನಾಲ್ಕು ವರ್ಷ ಪೂರೈಸಿರುವ, ರಂಗಶಿಕ್ಷಣದಲ್ಲಿ ಇನ್ನೂ ಅಂಬೆಗಾಲಿಡುತ್ತಿರುವ ಶಾಲೆ ಇದಾದರೂ, 25 ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸ ಮಾಡುತ್ತಾ ಬಂದಿರುವ ಕಲಾಸಂಘ ಮತ್ತು ಹದಿನೈದು ವರ್ಷಗಳ ಕಾಲ 'ಶಿವ ಸಂಚಾರ' ಎನ್ನುವ ಸಂಚಾರಿ ರಂಗತಂಡದ ಕೆಲಸ ಈ ಶಾಲೆಯ ಪ್ರಾರಂಭದ ಬೆನ್ನಿಗಿದೆ. ಕನ್ನಡದ ವಾತಾವರಣದಲ್ಲಿ, ಗುರುಕುಲ ಮಾದರಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಮತ್ತು ದೇಶದ ವಿವಿಧ ರಂಗಶಾಲೆಗಳ ಪಠ್ಯಕ್ರಮವನ್ನು ಗಮನದಲ್ಲಿರಿಸಿಕೊಂಡು ರೂಪಿಸಿರುವ ಕನ್ನಡದ ರಂಗಶಾಲೆ. ಗ್ರಾಮೀಣ ಭಾಗದ ಉತ್ಸಾಹೀ ಯುವಕ-ಯುವತಿಯರಿಗೆ ಶಾಸ್ತ್ರೀಯವಾಗಿ ಮತ್ತು ಪ್ರಾಯೋಗಿಕವಾಗಿ ರಂಗಭೂಮಿಯನ್ನು ಕಲಿಸಬೇಕೆನ್ನುವ ಉದ್ದೇಶದಿಂದ ಮತ್ತು ಇವತ್ತಿನ ಇಂಡಿಯಾದ ಸಂದರ್ಭವನ್ನು ಸಾಂಸ್ಕೃತಿಕವಾಗಿ ಎದುರಿಸುವ ಸಂಪರ್ಕ ಸೇತುವಾಗಿ ನಮ್ಮ ತರುಣ ತರುಣಿಯರು ರಂಗಭಾಷೆಯನ್ನು ಕಲಿತು ಕಾರ್ಯ ನಿರ್ವಹಿಸಬೇನ್ನುವ ಅಭಿಲಾಷೆಯಿಂದ ಈ ಶಾಲೆ ಪ್ರಾರಂಭವಾಗಿದೆ. ಅಪ್ಪಟ ಗ್ರಾಮೀಣ ಭಾಗದ ಕಸುವು, ಚೆಲುವು ರಂಗಭಾಷೆಗೆ ಮತ್ತು ರಂಗಕಲೆಗೆ ಒದಗಿಬರಲಿ ಎಂಬ ಉದ್ದೇಶವೂ ಈ ರಂಗಶಾಲೆಯ ಜೊತೆಗಿದೆ.

ಈ ನಾಲ್ಕು ವರ್ಷಗಳಲ್ಲಿ 65 ಜನ ವಿದ್ಯಾರ್ಥಿಗಳು ಈ ರಂಗಶಾಲೆಯಲ್ಲಿ ವ್ಯಾಸಂಗ ಮಾಡಿದ್ದಾರೆ. ಈ 65 ಜನರು ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಬಂದವರು ಎಂಬುದು ಗಮನಾರ್ಹ ಸಂಗತಿ. ಇವರಲ್ಲಿ ಬಹುಪಾಲು ವಿದ್ಯಾರ್ಥಿಗಳು ರಂಗ ಶಿಕ್ಷಣವನ್ನು ಮುಗಿಸಿ 'ಶಿವ ಸಂಚಾರ' ರೆಪರ್ಟರಿಯಲ್ಲಿ ನಟರಾಗಿ-ತಂತ್ರಜ್ಞರಾಗಿ ಕೆಲಸ ಮಾಡಿದ್ದಾರೆ. ಶೇಕಡ 90ರಷ್ಟು ಜನ ರಂಗಭೂಮಿಯನ್ನೇ ಪೂರ್ಣಾವಧಿ ವೃತ್ತಿಯಾಗಿ ಸ್ವಿಕರಿಸಿರುವುದು ಗಮನಾರ್ಹ. ಕೆಲವು ಜನ ಸಿನೇಮಾ ಹಾಗೂ ಕಿರುತೆರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ರಂಗಶಾಲೆಯು 'ಅಭಿನಯ'ವನ್ನೇ ಕೇಂದ್ರವಾಗಿ ಇಟ್ಟುಕೊಂಡು ಅದನ್ನು ಕಲಿಸುವ ಶಾಲೆಯಾಗಿ ರೂಪುಗೊಳ್ಳುತ್ತಿದೆ ಮತ್ತೆ ಹಾಗೆಯೇ ರೂಪುಗೊಳ್ಳಬೇಕು ಎನ್ನುವ ಉದ್ದೇಶವೂ ಈ ಶಾಲೆಗೆ ಇದೆ. 'ನಟ' ಪರಂಪರೆ ಬೆಳೆಯಬೇಕೆಂಬುದೇ ಇದರ ಆಶಯ ಅದಕ್ಕಾಗಿ ದೇಶದ ಕೆಲವು ಮೂಲರೂಪದ ಅಪರೂಪದ ಪ್ರದರ್ಶಕ ಕಲೆಗಳನ್ನು ನೇರವಾಗಿ ಅದನ್ನೇ ಅಭ್ಯಾಸ ಮಾಡುತ್ತಿರುವವರ ಮೂಲಕ ಕಲಿಸಲಾಗುತ್ತಿದೆ. ದೇಹ ಬಾಷೆಯ ಮೇಲಿನ ಅಭ್ಯಾಸಕ್ಕೂ ಕೂಡ ಬೇರೆ ರಾಜ್ಯಗಳಿಂದ ಸಂಒನ್ಮೂಲ ವ್ಯಕ್ತಿಗಳನ್ನು ಕರೆಸಲಾಗುತ್ತದೆ. ಅಭಿನಯಕ್ಕಾಗಿ ಒದಗಿಬರುವ ಧ್ವನಿ ಮತ್ತು ದೇಹದ ಥೆರಪಿಗೆ ಬೇಕಾದ ಲ್ಯಾಬ್ಗಳು ತಯಾರಾಗುತ್ತಿವೆ. ಅದಕ್ಕಾಗಿ ಬೇಕಾಗುವ ಸಾಹಿತ್ಯವನ್ನು ಅನುವಾದ ಮತ್ತು ಸಂಪಾದನೆಗಳ ಮೂಲಕ ಪಡೆದುಕೊಳ್ಳುತ್ತದೆ.
ಈ ರಂಗಶಾಲೆಯಲ್ಲಿನ ಪಾಠ - ಪ್ರವಚನಗಳಿಗೆ ಬಹುಪಾಲು ರಾಜ್ಯ ಹಾಗೂ ಹೊರ ರಾಜ್ಯದ ಅತಿಥಿ ಅಧ್ಯಾಪಕರನ್ನು ಆಶ್ರಯಿಸಿದೆ. ಆ ಅತಿಥಿ ಅಧ್ಯಾಪಕರು ಈ ಶಾಲೆಯನ್ನು ರೂಪಿಸುವುದರಲ್ಲೂ ಕೈಜೋಡಿಸಿರುವುದು ಗಮನಾರ್ಹ ಸಂಗತಿ. ರಂಗಶಾಲೆಯ ನಾಟಕ ತಯಾರಿಯ ಅಗತ್ಯಗಳನ್ನು ಗಮನಿಸಿ ಈ ಅತಿಥಿ ಉಪನ್ಯಾಸಕರನ್ನು ವರ್ಷವರ್ಷವೂ ಬದಲಾಯಿಸುತ್ತಿರುತ್ತೇವೆ. ಹಾಗಾಗಿ ರಂಗ ಶಿಕ್ಷಣಕ್ಕೆ ವೈವಿಧ್ಯತೆ ಪ್ರಾಪ್ತವಾಗಿದೆ.

ರಂಗಪ್ರಯೋಗ ಶಾಲೆಯು ನಾಲ್ಕು ವರ್ಷಗಳಲ್ಲಿ ಒಟ್ಟು 22 ನಾಟಕಗಳನ್ನು ಹಾಗೂ 10 ಅಭ್ಯಾಸ ಪ್ರಯೋಗಗಳನ್ನು ನಿರ್ಮಿಸಿದೆ , ಪ್ರತಿ ವರ್ಷ ಯಕ್ಷಗಾನ ಪ್ರಯೋಗವನ್ನು ಉಡುಪಿಯ ಯಕ್ಷಗಾನ ಕೇಂದ್ರದವರು ನೆಡಸಿಕೊಡುತ್ತಿದ್ದಾರೆ. ದೊಡ್ಡಾಟದ ಪ್ರಯೋಗವೂ ನಡೆದಿದೆ. ಸಣ್ಣಕತೆ, ಕಾವ್ಯಗಳ ಮೇಲಿನ ಆಶುವಿಸ್ತರಣಗಳೂ ನಡೆದಿವೆ. ಹಾಗೆ ನೆಡೆದ ನಾಟಕ ಪ್ರದರ್ಶನಗಳು, ನಾಟಕಕಾರರು, ನಿರ್ದೇಶಕರು, ರೂಪಾಂತರಕಾರರ ಪಟ್ಟಿ ಈ ಕೆಳಕಂಡಂತೆ ಇದೆ.

ಸಂಸ್ಕೃತ : ಪಂಚರಾತ್ರ, ಊರುಭಂಗ, ಉತ್ತರರಾಮ ಚರಿತೆ.
ಕನ್ನಡ : ಕತ್ತಲೆ ಬೆಳಕು, ಶಿವರಾತ್ರಿ, ಗುಣಮುಖ, ದಶಾನನ ಸ್ವಪ್ನಸಿದ್ಧಿ (ಶ್ರೀರಾಮಾಯಣ ದರ್ಶನಂ ಆಧರಿಸಿದ ಪ್ರಯೋಗ).
ಭಾರತಿಯ ಭಾಷೆಯಲ್ಲಿ : ಆಶಾಡದ ಒಂದು ದಿನ.
ಪಾಶ್ಚಾತ್ಯ ನಾಟಕಗಳು : ಕತ್ತಲೆಗೆ ಹತ್ತು ತಲೆ (Power of Darkness), ವಾರ್ಷಿಕೋತ್ಸವ ಮತ್ತು ಕಾಡು ಮನುಷ್ಯ(Anniversary and Bear), ಕ್ರಮ ವಿಕ್ರಮ (Measure for Measure), ಮಾಮಾಮೋಶಿ(The Bourgeois Gentleman), ಸಂಕಾನಕಟ್ಟಿಯ ಚಂದ್ರಿ(Good Woman of Setzuan).
ಯಕ್ಷಗಾನ : ಶಬರ ಶಂಕರ ವಿಳಾಸ, ಅಕ್ಕಾಮಹಾದೇವಿ, ಮೀನಾಕ್ಷಿ ಕಲ್ಯಾಣ.
ದೊಡ್ಡಾಟ : ಗಿರಿಜಾ ಕಲ್ಯಾಣ.
ಮಕ್ಕಳ ನಾಟಕ : ಗೆದ್ದಲು ಪಂಡಿತರು, ಗಾಂಧೀ ಪಾರ್ಕ್, ನಾಣೀಭಟ್ಟನ ಸ್ವರ್ಗದ ಕನಸು.
ಮಕ್ಕಳ ಹಬ್ಬದಲ್ಲಿ ನಡೆದ ನಾಟಕಗಳು : ಕೆಂಪು ಹೂ, ಹಂಚಿನ ಮನೆ ಪರಸಪ್ಪ, ಅಜ್ಜಿ ಕಥೆ, ಒಂದು ಮುತ್ತಿನ ಕಥೆ, ಕೋಗಿಲೆ ಗಾನ, ಮರುಳಸಿದ್ಧನ ಕಲಿಕೆ, ನವಿಲೆ ನವಿಲೆ, ಪುಟ್ಟಿಯ ಪಯಣ, ನಾಯಿತಿಪ್ಪ, ಅಂಚಿಮನೆ.
ನಾಟಕಕಾರರು : ಶೇಕ್ಸ್ ಪಿಯರ್, ಭಾಸ, ಭವಭೂತಿ, ಮೋಲಿಯೇರ್, ಟಾಲ್ಸ್ಟಾಯ್, ಆಂಟೆನ್ ಚೆಕಾಫ್, ರವೀಂದ್ರನಾಥ ಠಾಕೂರ್, ಕುವೆಂಪು, ಮೋಹನ್ ರಾಕೇಶ್, ಶ್ರೀರಂಗ, ಲಂಕೇಶ್, ಚಂದ್ರಶೇಖರ ಕಂಬಾರ.
ಅನುವಾದಕರು ಮತ್ತು ರೂಪಾಂತರಕಾರರು : ಕೆ. ವಿ. ಸುಬ್ಬಣ್ಣ, ಕೆ. ಗೊಂಡಪ್ಪ, ಸಿದ್ದಲಿಂಗ ಪಟ್ಟಣ ಶೆಟ್ಟಿ, ಶ್ರೀನಿವಾಸ ಸುತ್ರಾವೆ, ರಂ. ಶಾ. ಲೋಕಾಪುರ, ಕೆ. ವಿ. ಅಕ್ಷರ, ಜಸವಂತ್ ಜಾದವ್, ವೈದೇಹಿ.
ನಾಟಕ ನಿರ್ದೇಶಕರು : ಚಿದಂಬರ ರಾವ್ ಜಂಬೆ, ರಮೇಶ್ ವರ್ಮ, ಕೆ. ಈ. ಕೃಷ್ಣಮೂರ್ತಿ, ಮಂಜುನಾಥ್ ಬಡಿಗೇರ, ಮಹಾದೇವ ಹಡಪದ್, ಯತೀಶ್ ಚಾಮರಾಜನಗರ, ಮಹಾಂತೇಶ್ ರಾಮದುರ್ಗ, ಸುಷ್ಮ ಪ್ರಶಾಂತ್, ರೇಣುಕಾ ಸಿದ್ದಿ, ನಟರಾಜ ಹೊನ್ನವಳ್ಳಿ.