08199-243772

ಶ್ರೀ ಶಿವಕುಮಾರ ಕಲಾಸಂಘ:


ಅಸಾಮಾನ್ಯರು ಇತಿಹಾಸ ಸೃಷ್ಟಿಸಿದರೆ ಸಾಮಾನ್ಯರು ಅದನ್ನು ದಾಖಲಿಸುವ ಕೆಲಸ ಮಾಡುತ್ತಾರೆ ಎನ್ನುವ ಮಾತನ್ನು ಸುಳ್ಳು ಮಾಡಿದವರು 'ಶ್ರೀ ಶಿವಕುಮಾರ ಕಲಾಸಂಘ'ದವರು. ಇಲ್ಲಿ ಇತಿಹಾಸವನ್ನು ಸೃಷ್ಟಿಸಿದವರೇ ಅದನ್ನು ದಾಖಲಿಸಿದ್ದಾರೆ. ಈ ಸಾಧನೆಗೆ ಮುಖ್ಯ ಕಾರಣ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಅವರ ಜನಪರ ಕಾಳಜಿ ಮತ್ತು ವೈಚಾರಿಕ ಚಿಂತನೆ ಅನುಕರಣೀಯ. ಸಮಾಜದ ಮೌಢ್ಯವನ್ನು ಕಿತ್ತೊಗೆಯಲು ಅವರು ಧರ್ಮ, ಸಾಹಿತ್ಯ, ಶಿಕ್ಷಣ ಕ್ಷೇತ್ರದ ಜೊತೆಗೆ ನಾಟಕ ಕ್ಷೇತ್ರವನ್ನೂ ಆಯ್ಕೆ ಮಾಡಿಕೊಂಡರು. ತಾವೇ ನಾಟಕಗಳನ್ನು ರಚಿಸಿ,ನಿರ್ದೇಶಿಸಿದರು.ಕಲಾವಿದರನ್ನು ತಮ್ಮ ಶಿಷ್ಯರನ್ನಾಗಿ ಮಾಡಿಕೊಂಡು ಶರಣರ ಬದುಕಿನ ಸಾರವನ್ನು ಕಲಾಮಾಧ್ಯಮದ ಮೂಲಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಕೊಂಡೊಯ್ದರು. ಇಂಥವರ ನೆನಪು ಮತ್ತು ಚಿಂತನೆಗಳನ್ನು ಸದಾ ಜೀವಂತವಾಗಿರಿಸಲು 1987ರಲ್ಲಿ ಸಾಣೇಹಳ್ಳಿಯಲ್ಲಿ ಹುಟ್ಟಿಕೊಂಡದ್ದೇ 'ಶ್ರೀ ಶಿವಕುಮಾರ ಕಲಾಸಂಘ'. ಸ್ಥಳೀಯ ಕೃಷಿಕರು, ಕೂಲಿಕಾರರು, ಪ್ರೌಢಶಾಲೆಯ ನೌಕರರು ಹಾಗೂ ವಿದ್ಯಾರ್ಥಿಗಳು ಸಂಘದ ಸದಸ್ಯರಾಗಿ ಹೊಸ ಹೊಸ ನಾಟಕಗಳನ್ನು ಅಭಿನಯಿಸುತ್ತ ಸಂಘದ ಜಂಗಮತ್ವಕ್ಕೆ ಕಾರಣರಾದರು.ಇದುವರೆಗೆ ಸಂಘದ ಕಲಾವಿದರು ಅಭಿನಯಿಸಿರುವ ನಾಟಕಗಳು ನೂರರ ಗಡಿ ತಲುಪಲಿವೆ. ತತ್ಫಲವಾಗಿ ಸಂಘದ ಸದಸ್ಯರಾದ ಎಸ್ ಕೆ ಪರಮೇಶ್ವರಯ್ಯ, ಬಿ ಎನ್ ಬ್ರಹ್ಮಾಚಾರ್, ಗವಾಯಿ ಫಕ್ಕೀರಪ್ಪ, ಹೆಚ್ ಆರ್ ರಮೇಶ್, ಮಂಜುಳಾ ಬದಾಮಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದು ಸಂಘದ ಗೌರವ ಹೆಚ್ಚಿಸಿದ್ದಾರೆ.ಅಲ್ಲದೆ ಪರಮೇಶ್ವರಯ್ಯ,ವೈ ಡಿ ಬದಾಮಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಂಘದ ಮಹಾಪೋಷಕರಾಗಿರುವ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ೧೯೯೮ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ 'ಗೌರವ ಫೆಲೋಷಿಪ್' ಮತ್ತು2004ರಲ್ಲಿ ಕರ್ನಾಟಕ ಸರ್ಕಾರದ ಕನ್ನಡ 'ರಾಜ್ಯೋತ್ಸವ 'ಪ್ರಶಸ್ತಿ ಲಭ್ಯವಾಗಿವೆ. ನಮ್ಮ ಸಂಘದಿಂದ ಸುವರ್ಣ ಕರ್ನಾಟಕದ ಹಿನ್ನೆಲೆಯಲ್ಲಿ 'ಭಾರತ ರಂಗ ಸಂಚಾರ' ನಡೆದದ್ದು ವಿಶೇಷ. ಕನ್ನಡದ ಜಂಗಮದೆಡೆಗೆ, ತಲೆದಂಡ, ಸಂಕ್ರಾಂತಿ, ನಾಟಕಗಳನ್ನು ಹಿಂದಿ ಭಾಷೆಯಲ್ಲಿ ನಮ್ಮ ಕಲಾವಿದರು ಕಲಿತು 2007ಮಾರ್ಚ್ 9 ರಿಂದ ಮೇ 17 ರವರೆಗೆ ಹೈದ್ರಾಬಾದ್, ಕಟಕ್, ಕಲ್ಕತ್ತ, ಹರಿದ್ವಾರ, ದೆಹಲಿ, ಕಾಶಿ, ಜೈಪುರ, ಮುಂಬೈ, ಗೋವಾ ಹೀಗೆ 11 ರಾಜ್ಯಗಳ 21 ನಗರಗಳಲ್ಲಿ 46 ಪ್ರದರ್ಶನ ನೀಡಿದ್ದು ಗಮನಾರ್ಹ.ಇದನ್ನು ಗುರುತಿಸಿದ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶೇಷ ಅಭಿನಂದನಾ ಸಮಾರಂಭ ಏರ್ಪಡಿಸಿ ಕಲಾವಿದರನ್ನು ಹಾಗೂ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳನ್ನು ಗೌರವಿಸಿದ್ದಲ್ಲದೆ 'ಸುವರ್ಣ ಕರ್ನಾಟಕ ಗೌರವ ಪುರಸ್ಕಾರ 'ನೀಡಿದ್ದು ಸ್ಮರಣಾರ್ಹ. ಸಂಘದ ಮತ್ತೊಂದು ಹೆಮ್ಮೆಯ ಸಾಧನೆ ಎಂದರೆ ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ 'ಜಂಗಮದೆಡೆಗೆ' ನಾಟಕವನ್ನು ಅಭಿನಯಿಸಿ ಅಲ್ಲಿಯ ಪ್ರೇಕ್ಷಕರಿಗೆ ಶರಣತತ್ವದ ಪರಿಚಯ ಮಾಡಿಸಿದ್ದು. ಕಲೆ ಮತ್ತು ಧರ್ಮ ಬೇರೆ ಬೇರೆ ಅಲ್ಲ. ಧರ್ಮದೊಳಗೆ ಕಲೆ ಬೆರೆತರೆ ಅದಕ್ಕೊಂದು ಸೌಂದರ್ಯಾತ್ಮಕ ನೆಲೆ; ಕಲೆಯೊಳಗೆ ಧರ್ಮ ಬೆರೆತರೆ ಅದಕ್ಕೊಂದು ದೈವೀಕ ಶ್ರದ್ಧೆ, ಗುರುತರ ಹೊಣೆಗಾರಿಕೆ. ಈ ಆಶಯ ದೊಂದಿಗೆ 1987ರಲ್ಲಿ ಹುಟ್ಟಿದ 'ಶ್ರೀ ಶಿವಕುಮಾರ ಕಲಾಸಂಘ' ಇದುವರೆಗೂ ಸ್ಥಾವರವಾಗದೆ ತನ್ನ ಜಂಗಮತ್ವ ಕಾಯ್ದುಕೊಂಡು ಬಂದಿರುವುದು ಗಮನಾರ್ಹ.


ಶ್ರೀ ಶಿವಕುಮಾರ ಕಲಾಸಂಘದ ಪಕ್ಷಿನೋಟ:

 ಸ್ಥಾಪನೆ-1987. ಇದುವರೆಗೆ 60ಕ್ಕಿಂತ ಹೆಚ್ಚು ನಾಟಕಗಳ ಸಾವಿರಾರು ಪ್ರದರ್ಶನ ನೀಡಲಾಗಿದೆ.
  ಶಿವಸಂಚಾರ ಆರಂಭ-1997.
 ಇದುವರೆಗೆ 42 ನಾಟಕಗಳ 1800ಕ್ಕೂ ಹೆಚ್ಚು ಪ್ರದರ್ಶನಗಳಾಗಿವೆ.
  ಶ್ರೀ ಶಿವಕುಮಾರ ಬಯಲು ರಂಗಮಂದಿರದ ನಿರ್ಮಾಣ-2003. ಗ್ರಾಮೀಣ ಭಾರತದಲ್ಲೇ ಅಪರೂಪದ ಗ್ರೀಕ
  ಮಾದರಿಯ ಈ ರಂಗಮಂದಿರದಲ್ಲಿ 5000 ಪ್ರೇಕ್ಷಕರು ಕುಳಿತುಕೊಳ್ಳಬಹುದು.
  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ-2004 (ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರಿಗೆ)
  ಶ್ರೀ ಶಿವಕುಮಾರ ಪ್ರಶಸ್ತಿ ಪುರಸ್ಕಾರ-2004 ರಿಂದ. ಇದುವರೆಗೆ ಪ್ರಶಸ್ತಿ ಪಡೆದಿರುವ ರಂಗಕರ್ಮಿಗಳು.
1. ಪ್ರಸನ್ನ
2. ಸಿಜಿಕೆ
3. ಪಿ ಗಂಗಾಧರಸ್ವಾಮಿ
4. ಅಶೋಕ ಬಾದರದಿನ್ನಿ,
5. ಮಾಲತಿಶ್ರೀ ಮೈಸೂರು.
6.ಸಿ.ಬಸವಲಿಂಗಯ್ಯ
 ಭಾರತ ರಂಗಸಂಚಾರ-2007. ಜಂಗಮದೆಡೆಗೆ, ತಲೆದಂಡ, ಸಂಕ್ರಾಂತಿ ನಾಟಕಗಳನ್ನು ಹಿಂದಿ ಭಾಷೆಯಲ್ಲಿ ಭಾರತದ ಪ್ರಮುಖ
  21 ನಗರಗಳಲ್ಲಿ 46 ಪ್ರದರ್ಶನ ನೀಡಲಾಗಿದೆ.
 ಕರ್ನಾಟಕ ನಾಟಕ ಅಕಾಡೆಮಿಯಿಂದ ವಿಶೇಷ ಪುರಸ್ಕಾರ-2007.
  ಅಮೆರಿಕದ 'ಅಕ್ಕ 'ಸಮ್ಮೇಳನದಲ್ಲಿ (2008) ಜಂಗಮದೆಡೆಗೆ ನಾಟಕ ಪ್ರದರ್ಶನ.
  ಶ್ರೀ ಶಿವಕುಮಾರ ರಂಗ ಪ್ರಯೋಗ ಶಾಲೆ ಪ್ರಾರಂಭ-2008.
  ಪುಸ್ತಕ ಪ್ರಕಟಣೆ-25ಕ್ಕೂ ಹೆಚ್ಚು ಕೃತಿಗಳು.
 ವಚನ ಸಂಗೀತ ಹಾಡುವ ತಂಡವಿದೆ.
  ಬೀದಿ ನಾಟಕಗಳ ಸಾವಿರಾರು ಪ್ರದರ್ಶನ ಮಾಡಲಾಗಿದೆ.
 ಸಮಕಾಲೀನ ಸಂಗತಿಗಳ ಕುರಿತ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುವುದು.
  ಪ್ರತಿಭಾನ್ವಿತರ ಪುರಸ್ಕಾರ.
 ಮಕ್ಕಳ ಮತ್ತು ಶಿಕ್ಷಕರ ರಂಗತರಬೇತಿ ಶಿಬಿರಗಳು.