DENN GANS SANGAD ರಂಗ ಪ್ರಯೋಗಶಾಲೆ

08199-243772

ಮಠದ ಚರಿತ್ರೆ


ಕರ್ನಾಟಕದ ಸುಪ್ರಸಿದ್ಧ ಮಠಗಳಲ್ಲಿ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವೂ ಒಂದು. ಇದರ ಸಂಸ್ಥಾಪಕರು ಬಸವಾದಿ ಶಿವಶರಣರ ಹಿರಿಯ ಸಮಕಾಲೀನರಾಗಿದ್ದ 'ಮರುಳಸಿದ್ಧರು'. ಹುಟ್ಟಿದ ಜಾತಿಯಿಂದ ಮಾದಿಗರಾಗಿದ್ದರೂ ಜನಪರ ಕಾಳಜಿ, ಅಜ್ಞಾನ-ಮೌಢ್ಯಗಳ ವಿರುದ್ಧದ ಹೋರಾಟದಿಂದಾಗಿ 'ವಿಶ್ವಬಂಧು' ಎನ್ನುವ ಪ್ರಖ್ಯಾತಿ ಪಡೆದರು. ಧಾರ್ಮಿಕ ಶೋಷಣೆಯ ವಿರುದ್ಧ ದನಿ ಎತ್ತಿ, ಪೂಜಾರಿ ಪುರೋಹಿತರ, ಪಟ್ಟಭದ್ರರ ಹುಳುಕುಗಳನ್ನು ಬಯಲುಗೊಳಿಸಿ ಅವರ ಆಕ್ರೋಶಕ್ಕೆ ತುತ್ತಾಗಬೇಕಾಯಿತು. ಆದರೂ ಎದೆಗುಂದದೆ ತಮ್ಮ ಸೇವಾಕಾರ್ಯಗಳು ತಮ್ಮ ನಂತರವೂ ಮುಂದುವರಿಯಬೇಕೆಂದು ಬಳ್ಳಾರಿ ಜಿಲ್ಲೆ, ಕೂಡ್ಲಿಗಿ ತಾಲ್ಲೂಕಿನ ಉಜ್ಜಯಿನಿಯಲ್ಲಿ 'ಸದ್ಧರ್ಮ ಪೀಠ' ಸ್ಥಾಪಿಸಿ ಅದರ ಮೇಲೆ ತಮ್ಮ ಪ್ರಿಯ ಶಿಷ್ಯ ತೆಲಗುಬಾಳು ಸಿದ್ಧೇಶ್ವರರನ್ನು ಕೂರಿಸಿ ’ತರಳ ಬಾಳು’ ಎಂದು ಹರಸುವರು. ಲೋಕದ ಜನರೆಲ್ಲರೂ ಮಕ್ಕಳಿದ್ದಂತೆ. ಅವರು ಸುಖವಾಗಿ ಬಾಳಬೇಕು ಎನ್ನುವುದು ತರಳಬಾಳು ಪಂಚಾಕ್ಷರಿ ಮಂತ್ರದ ಮತಿತಾರ್ಥ. ಅಲ್ಲಿಂದ ತರಳಬಾಳು ಗುರು ಪರಂಪರೆ ಪ್ರಾರಂಭವಾಗುವುದು. ಉಜ್ಜಯಿನಿಯಲ್ಲೇ ನೆಲೆಯೂರಿದ್ದ ಈ ಪೀಠ ಕ್ರಿ ಶ 1700ರ ಸುಮಾರಿನಲ್ಲಿ ಪಟ್ಟಭದ್ರ ಹಿತಾಸಕ್ತರ ಪಿತೂರಿಯ ಫಲವಾಗಿ ಉಜ್ಜಯಿನಿ ತ್ಯಜಿಸಿ ಸಿರಿಗೆರೆಯಲ್ಲಿ ನೆಲೆಸುವಂತಾಯಿತು.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಶಾಖಾ ಮಠಗಳಲ್ಲಿ ಸಾಣೇಹಳ್ಳಿಯ ಶ್ರೀಮಠವೂ ಒಂದು. ಈ ಮಠ ಸಿದ್ಧರಿಂದಲೇ ಪ್ರಸಿದ್ಧವಾಗಿದೆ. ಶ್ರೀಮಠಕ್ಕೆ 9 ತಲೆಮಾರುಗಳ ಇತಿಹಾಸವಿದ್ದರೂ ಬಸವಾದಿ ಶಿವಶರಣರ ಕಾಲದಿಂದಲೂ ಈ ಮಠ ಅಸ್ತಿತ್ವದಲ್ಲಿತ್ತೆಂದು ಜನವಾಣಿಯಿಂದ ತಿಳಿದು ಬರುವುದು. ಕ್ರಿ ಶ 1665ರಲ್ಲಿ ಭಾಗ್ಯಪುರಿ ಪಟ್ಟಣವನ್ನು (ಇಂದಿನ ಬಾಗೂರು) ಆಳುತ್ತಿದ್ದ ಹನುಮಪ್ಪ ನಾಯಕನ ಅರಮನೆಯಲ್ಲಿ ಕ್ಷುದ್ರಶಕ್ತಿಯ ಉಪಟಳ ಅತಿಯಾಗುವುದು. ಆಗ ರಾಜನ ಆಹ್ವಾನದ ಮೇರೆಗೆ ಸಾಣೇಹಳ್ಳಿ ಶ್ರೀಗಳು (ಹಾಲುಮಲ್ಲೇಶ್ವರ ಬೆಟ್ಟದಲ್ಲಿದ್ದ ಮಲ್ಲೇದೇವರು) ಅರಮನೆಗೆ ದಯಮಾಡಿಸಿ ಇಷ್ಟಲಿಂಗ ಪೂಜಾನುಷ್ಠಾನದ ಬಲದಿಂದ ಕ್ಷುದ್ರಶಕ್ತಿಯ ಉಪಟಳವನ್ನು ನಿವಾರಿಸುವರು. ಆಗ ಸ್ತ್ರೀ ರೂಪ ತಳೆದ ಆ ಕ್ಷುದ್ರ ಶಕ್ತಿ ಸ್ವಾಮಿಗಳಿಗೆ ಶರಣಾಗಿ ತಮ್ಮ ಮಠದಲ್ಲಿ ನನಗೆ ಆಶ್ರಯ ನೀಡಬೇಕೆಂದು ಪ್ರಾರ್ಥಿಸಿಕೊಂಡಳಂತೆ. ಅವಳ ಅಭಿಲಾಷೆಯಂತೆ ಆಗಲಿ ಎನ್ನುವರು. ಇದರ ಸ್ಮಾರಕವಾಗಿ ಶ್ರೀಮಠದಲ್ಲಿ ಈಗಲೂ ಒಂದು ಕಲ್ಲಿನ ಕಂಭವನ್ನು ಚೌಡಿಯ ಸಂಕೇತವಾಗಿ ಪೂಜಿಸುವ ಪದ್ಧತಿ ಇದೆ. ಈ ಚೌಡಿಯ ಉಪಟಳ ತಪ್ಪಿಸಿದ್ದರಿಂದ ಸಂಪ್ರೀತನಾದ ನಾಯಕ 65 ಎಕರೆ ಭೂಮಿಯನ್ನು ಶ್ರೀಮಠಕ್ಕೆ ದತ್ತಿಯಾಗಿ ನೀಡುವನು. ಈಗಲೂ ಆ ಭೂಮಿಯ ಒಡೆತನ ಶ್ರೀಮಠದ್ದಾಗಿದೆ.

ಸಾಣೇಹಳ್ಳಿ ಶ್ರೀಮಠದ ಚರಪಟ್ಟಾಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮಿಗಳು 17-06-1956 ರಲ್ಲಿ ಲಿಂಗೈಕ್ಯರಾದನಂತರ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರೇ ಭಕ್ತರ ಅಭಿಲಾಷೆಯಂತೆ ಸಾಣೇಹಳ್ಳಿ ಮಠದ ಆಡಳಿತವನ್ನೂ ನಿರ್ವಹಿಸುತ್ತಿದ್ದರು. ತಮ್ಮ ಆಡಳಿತಾವಧಿಯಲ್ಲಿ ಮಠದ ಭೂಮಿಗೆ 2000 ತೆಂಗಿನ ಗಿಡಗಳನ್ನು ಹಾಕಿಸಿದರು. ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಿಂದ 24-06-1964ರಲ್ಲಿ "ಶ್ರೀ ಗುರುಪಾದೇಶ್ವರ ಪ್ರೌಢಶಾಲೆ" ಮತ್ತು "ಶ್ರೀ ರೇವಣಸಿದ್ಧ ಸಾರ್ವಜನಿಕ ಅನಾಥಾಲಯ" ತೆರೆದರು. ಪುರಾತನವಾದ ಈ ಮಠದ ಚುಕ್ಕಾಣಿ ಹಿಡಿದು ಭಕ್ತಸಮೂಹವನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಸಮರ್ಥ ಗುರು ಬೇಕೆಂದು ತಮ್ಮ ಕೃಪಾಶ್ರಯದಲ್ಲೇ ಶಿಕ್ಷಣ ಪಡೆದು ಎಂ ಎ ಪದವೀಧರರಾಗಿದ್ದ, ಕೆ ಎನ್ ಪಂಡಿತಾರಾಧ್ಯಮಠ ಎನ್ನುವ ವಟುವಿಗೆ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಎಂಬ ನಾಮಕರಣ ಮಾಡಿ 25-12-1977 ರಂದು ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರನ್ನಾಗಿ ಮಾಡಿದರು.